ಮರಣೋತ್ತರ ಪರೀಕ್ಷೆ -
ಮರಣಕಾರಣವನ್ನು ತಿಳಿಯಲು ಜರಗಿಸುವ ಮೃತದೇಹದ ಹೊರ ಹಾಗೂ ಒಳ ಅವಯವಗಳ ಸ್ಥೂಲ, ಸೂಕ್ಷ್ಮ ಮತ್ತು ರಾಸಾಯನಿಕ ಪರೀಕ್ಷೆ (ಆಟಾಪ್ಸಿ; ಪೋಸ್ಟ್‍ಮಾರ್ಟಮ್ ಎಕ್ಸಾಮಿನೇಷನ್; ನೆಕ್ರಾಪ್ಸಿ), ಶವ ಪರೀಕ್ಷೆ ಇದರ ಪರ್ಯಾಯನಾಮ. ಶವಪರೀಕ್ಷಕ ಮೃತದೇಹವನ್ನು ಕೊಯ್ದು ಸ್ವತಃ ತನ್ನ ಕಣ್ಣುಗಳಿಂದಲೇ ನೋಡಿ ಮರಣಕಾರಣವನ್ನು ತಿಳಿಯಲು ಯತ್ನಿಸುವುದರಿಂದ ಪಾಶ್ಚಾತ್ಯ ದೇಶದಲ್ಲಿ ಇದಕ್ಕೆ ಆಟಾಪ್ಸಿ ಎಂದು ಕರೆದಿದೆ.

	ಪ್ರಾಚೀನ ಭಾರತದಲ್ಲಿ ಯಾವ ಕಾರಣಕ್ಕಾಗಿಯೂ ಶವಪರೀಕ್ಷೆ ಮಾಡಿರುವುದು ತಿಳಿದುಬಂದಿಲ್ಲ. ಶವವನ್ನು ಹಾಗೆಯೇ ಸಂಸ್ಕಾರಮಾಡುವುದು ಮೊದಲಿನಿಂದಲೂ ರೂಢಿಯಾಗಿದೆ ಎಂದು ಹೇಳಬಹುದು. ಪ್ರಾಚೀನ ಗ್ರೀಸಿನಲ್ಲಿಯೂ ಅಂತೆಯೇ ಕ್ರಿಶ್ಚನ್ ಮತ್ತು ಯಹೂದ್ಯ ಮತೀಯ ಗ್ರಂಥಗಳಲ್ಲಿಯೂ ಶವಪರೀಕ್ಷೆ ಮಾಡಲು ಯಾವುದೇ ನಿಷೇಧವಿರುವುದು ಕಂಡುಬಂದಿಲ್ಲ. ಆದರೆ ರೋಮನ್ನರಲ್ಲಿ ಪ್ರಾಚೀನ ಚೀನಿಯರಲ್ಲಿ ಮತ್ತು ಮುಸಲ್ಮಾನರಲ್ಲಿ ಶವಪರೀಕ್ಷೆಗೆ ಸಾಮಾಜಿಕ ನಿಷೇಧವಿದ್ದುದು ತಿಳಿದಿದೆ.

	ರೋಗ ಪ್ರಕ್ರಿಯೆಗಳನ್ನು ತಿಳಿಯಲೆಂದೇ ಮೊತ್ತಮೊದಲು ಮೃತದೇಹವನ್ನು ಕೊಯ್ದು ನೋಡಿದ್ದು ಅಲೆಗ್ಸಾಂಡ್ರಿಯದಲ್ಲಿದ್ದ ಹೆರೊಫಿಲಸ್ ಮತ್ತು ಇರಾನಿಸ್ಟ್ರೇಟಸ್ ಎಂಬ ಗ್ರೀಕ್ ವೈದ್ಯರು (ಕ್ರಿ.ಪೂ.ಸು. 300). ಮುಂದೆ ಕ್ರಿ.ಶ.ಸು. 130-200ರಲ್ಲಿ ಬದುಕಿದ್ದನೆಂದು ಹೇಳಲಾಗಿರುವ ಗ್ಯಾಲೆನ ಎಂಬ ರೋಮನ್ ವೈದ್ಯ ಶವಪರೀಕ್ಷೆಯಲ್ಲಿ ಕಂಡುಬಂದ ಅಂಗವಿಕಾರಗಳಿಗೂ ಆ ವ್ಯಕ್ತಿ ಸಾಯುವ ಮುನ್ನ ಕಂಡು ಬಂದಿದ್ದ ರೋಗಲಕ್ಷಣಗಳಿಗೂ ಹೊಂದಾಣಿಕೆ ತರಲು ಪ್ರಯತ್ನಿಸಿದ. ಅಲ್ಲಿಂದ ಮುಂದೆ ಶವ ಪರೀಕ್ಷೆಮಾಡುವ ರೂಢಿ ಬಿಟ್ಟುಹೋಗಿ ಯೂರೋಪಿನ ಮಧ್ಯಯುಗ ಅಂದರೆ ಸುಮಾರು 1200-1300ರ ತನಕ ಮಾನವದೇಹದ ಮರಣೋತ್ತರ ಪರೀಕ್ಷೆ ನಿಷಿದ್ಧವೆಂದೇ ಪರಿಗಣಿಸಲ್ಪಟ್ಟಿತ್ತು. ಆ ಬಳಿಕ ಇಟಲಿಯ ಬೊಲೊನ್ ನಗರದ ಮಾಂಡಿನೊ ಲಿಯುಕ್ಸಿ ಎಂಬಾತ 1315ರಲ್ಲಿ ಬಹಿರಂಗವಾಗಿಯೇ ಮಾಡಿದ ಶವಪರೀಕ್ಷೆಯೇ ಮೊತ್ತಮೊದಲನೆಯ ಮಾನವ ಶವಪರೀಕ್ಷೆ. 1302ರಲ್ಲಿ ಇದೇ ನಗರದ ನ್ಯಾಯಾಧಿಕಾರಿಯೊಬ್ಬ ಮರಣಕಾರಣವನ್ನು ನಿಖರವಾಗಿ ತಿಳಿಯಬೇಕೆಂದು ಶವಪರೀಕ್ಷೆ ಮಾಡಲು ಆಣತಿ ನೀಡಿದ್ದನೆಂದು ತಿಳಿದುಬಂದಿದ್ದರೂ ಅದು ಕಾರ್ಯರೂಪಕ್ಕೆ ಬಂತೇ ಎಂಬುದು ಖಚಿತವಿಲ್ಲ. ಆನಂತರ ಲಿಯೊನಾರ್ಡೊ ಡ  ವಿಂಚಿಯಿಂದ (1452-1519) ಮತ್ತು ಮೈಕೆಲ್ ಏಂಜೆಲೋವಿನಿಂದ (1475-1564) ಸುಮಾರು 40-50 ಶವಗಳು ಮರಣೋತ್ತರ ಪರೀಕ್ಷೆಗಾಗಿ ಛೇದಿಸಲ್ಪಟ್ಟವೆಂದು ತಿಳಿದಿದೆ. ಸುಮಾರು 1680ರ ಹೊತ್ತಿಗೆ ಅನೇಕಾನೇಕ ಶವಪರೀಕ್ಷೆಗಳಿಂದ ತಿಳಿದುಬಂದ ವಿಷಯಗಳನ್ನು ಸಂಗ್ರಹಿಸಿ ಥಿಯೋಫೈಲ್ ಬೆಕೆಟ್ ಎಂಬ ಜರ್ಮನ್ ವಿಜ್ಞಾನಿ ಒಂದು ಗ್ರಂಥ ಬರೆದ. ಆದರೆ ರೋಗಿಯ ಶವಪರೀಕ್ಷೆಯಲ್ಲಿ ಕಣ್ಣಿಗೆ ಕಂಡುಬಂದ ಒಳ ಅಂಗಗಳ ವಿಚಾರಗಳನ್ನು ಆ ವ್ಯಕ್ತಿ ರೋಗದಿಂದ ನರಳುತ್ತಿದ್ದಾಗ ವ್ಯಕ್ತವಾಗಿದ್ದ ಲಕ್ಷಣಗಳಿಗೆ ಅನ್ವಯಿಸಿ ಇಂಥ ಸುಮಾರು 700 ಪ್ರಸಂಗಗಳನ್ನು ವಿವರಿಸಿ ಮೊತ್ತಮೊದಲಾಗಿ ಒಂದು ಗ್ರ್ರಂಥವನ್ನು (1761) ಬರೆದವ ಇಟಲಿಯ ಗಿಯೋವಾನಿ ಮಾರ್ಗಾಗ್ನಿ. ಈ ವ್ಯಾಸಂಗ ಸಂದರ್ಭದಲ್ಲಿ ಆತ ತನ್ನ ಗುರು ವಾಲ್ಸಾಲ್ವ (1666-1723) ಸಾರಿಹೇಳುತ್ತಿದ್ದ ಅಂಶವೊಂದನ್ನು ಸ್ಥೀರೀಕರಿಸಿದ; ಮಿದುಳಿನಲ್ಲಿ ಯಾವ ಪಾಶ್ರ್ವದಲ್ಲಿ ರಕ್ತಸ್ರಾವವಾಗಿದೆಯೋ ಅದಕ್ಕೆ ಪ್ರತಿಪಾಶ್ರ್ವದಲ್ಲಿ ಪಕ್ಷಾಘಾತ ಕಂಡುಬರುತ್ತದೆ. ಅದು ನಿಜವೆಂದು ಮಾರ್ಗಾಗ್ನಿ ಮಾಡಿದ ಶವಪರೀಕ್ಷೆಗಳಿಂದ ಖಾತರಿ ಆಯಿತು. ಇದರಂತೆಯೇ ನ್ಯೂಮೋನಿಯ ರೋಗದ ಮೊದಲ ಹಂತಗಳಲ್ಲಿ ಶ್ವಾಸಕೋಶಗಳು ಮೇಲ್ನೋಟಕ್ಕೆ ಯಕೃತ್ತನ್ನು ಹೋಲುತ್ತವೆ ಎಂಬುದು ವ್ಯಕ್ತವಾಯಿತು. ಆದ್ದರಿಂದಲೇ ಆ ಹಂತಗಳಿಗೆ ರೆಡ್-ಮತ್ತು ಗ್ರೇ-ಹೆಪೆಟೈಸೇಶನ್ ಎಂದು ಹೆಸರಾಯಿತು. ಹಾಗೆಯೇ ಮಾರ್ಗಾಗ್ನಿ ಮಾಡಿದ ಶವಪರೀಕ್ಷೆಗಳಿಂದ ಯಕೃತ್ತಿನ ನಾರುಗಟ್ಟಿಕೆ (ಸಿರ್ಹೋಸಿಸ್), ಹಳದಿ ಅವನತಿ (ಎಲ್ಲೊ ಆಟ್ರೋಫಿ). ಪರಂಗಿ ರೋಗದಲ್ಲಿ ಕಂಡುಬರುವ ಮಹಾ ಅಪಧಮನಿಯ ಹಿಗ್ಗಣೆ (ಸಿಫಿಲಿಟಿಕ್ ಅಯೋರ್ಟಿಕ ಅನ್ಯೂರಿಸಮ್) ಮುಂತಾದ ರೋಗಗಳಲ್ಲಿ ವಿಶಿಷ್ಟ ಅಂಗವಿಕಾರಗಳು ವಿಶದೀಕರಿಸಲ್ಪಟ್ಟವು. ಹೀಗೆ ಶವಪರೀಕ್ಷೆಗಳಿಂದಲೇ ವೈದ್ಯವಿಜ್ಞಾನದಲ್ಲಿ ಅನೇಕಾನೇಕ ವಿಷಯಗಳು ಪ್ರಕಟವಾಗಿವೆ. ಉದಾಹರಣೆಗೆ ಹೃದ್ರೋಗದಿಂದಲೇ ಒಬ್ಬ ವ್ಯಕ್ತಿ ಮೃತನಾಗಿದ್ದಾಗ ಅವನ ಹೃದಯದ ಯಾವ ಭಾಗಗಳನ್ನು ಎಷ್ಟರಮಟ್ಟಿಗೆ ಮತ್ತು ಹೇಗೆ ರೋಗದ ಕಾರಣವಾಗಿ ಬದಲಾಯಿಸಿವೆ, ಇಲ್ಲವೆ ನಾಶವಾಗಿವೆ, ಇಲ್ಲವೆ ವಿಕೃತಿಗೊಂಡಿವೆ. ಎಂಬುದು ವ್ಯಕ್ತವಾಗಿ ವ್ಯಕ್ತಿ ರೋಗದಿಂದ ನರಳುತ್ತಿದ್ದ ಕಾಲದಲ್ಲಿ ರೋಗ ಲಕ್ಷಣಗಳಿಗೆ ಕಾರಣಗಳು ಗೊತ್ತಾಗಿವೆ. ಇದೇ ರೀತಿ ದುರ್ಮಾಂಸದಿಂದ ವ್ಯಕ್ತಿ ಮರಣಹೊಂದಿದ್ದರೆ ಆತನ ಶವಪರೀಕ್ಷೆಯಿಂದ ಮರಣ ದುರ್ಮಾಂಸದಿಂದಲೇ ಉಂಟಾಯಿತೇ ಇಲ್ಲವೆ ಅದರಿಂದ ನೆರೆಯ ಅಂಗಗಳ ಕ್ರಿಯೆಗೆ ಅಡಚಣೆ ಉಂಟಾಗಿ ಅದರಿಂದ ಸಾವು ಉಂಟಾಯಿತೇ ಎನ್ನುವುದು ವಿಶದವಾಗಿ ಅಂಥ ಸಂದರ್ಭಗಳಲ್ಲಿ  ಅಂಥ  ಕ್ರಿಯಾನಾಶಗಳುಂಟಾಗುವ ಸಂಭವಗಳನ್ನು ಬೆಳಕಿಗೆ ತಂದಿರುತ್ತವೆ. ಬದುಕಿದ್ದಾಗ ಯಾವ ವಿಶಿಷ್ಟ ಲಕ್ಷಣಗಳನ್ನು ಉಂಟುಮಾಡದಿದ್ದರೂ ಹಲವಾರು ಅಂಗಗಳು ಅಗಾಧವಾಗಿಯೇ ರೋಗ ಪ್ರಕ್ರಿಯೆಗಳನ್ನು ತೋರುವ ಸಂದರ್ಭಗಳು ಅನೇಕವಾಗಿ ಶವಪರೀಕ್ಷೆಯಿಂದ ಬೆಳಕಿಗೆ ಬಂದಿವೆ. ನೂರಾರು ವರ್ಷಗಳಿಂದ ಹೀಗೆ ಶವಪರೀಕ್ಷೆ ಮಾಡಿ ಪಡೆದಿರುವ ಜ್ಞಾನಸಂಪತ್ತಿನಿಂದ ಇಂದು ವೈದ್ಯರಿಗೆ ರೋಗನಿಧಾನ ಬಲುಮಟ್ಟಿಗೆ ಸುಲಭವಾಗಿದೆ.

	ಶವಪರೀಕ್ಷೆಯಿಂದ ಕಣ್ಣಿಗೆ ಕಾಣಬರುವ ಅಂಗವಿಕೃತಿಗಳು ಹೇಗೆ ರೋಗಪ್ರಕ್ರಿಯೆಗಳನ್ನು ಅರಿಯಲು ತುಂಬ ಸಹಾಯಕವಾಗಿರುವುವೆಂಬ ಅಂಶವನ್ನು ಚೆನ್ನಾಗಿ ಪ್ರಚಾರಮಾಡಿದಾತ ವಿಯನ್ನದ ಕಾರ್ಲ್‍ವಾನ್ ರಾಕಿಟಾನ್ಸ್ಕಿ (1804-78). ಆದರೆ ಇದಕ್ಕಿಂತಲೂ ಹೆಚ್ಚಾಗಿ ಮತ್ತು ಮುಖ್ಯವಾಗಿ ಜೀವಕೋಶಗಳಲ್ಲಿ ವಿಶಿಷ್ಟವಾದ ರೋಗಪ್ರಕ್ರಿಯೆಗಳು ಉಂಟಾಗುತ್ತವೆ ಎಂದು ವರ್ಕೌ(1821-1902) ಎಂಬ ಪ್ರಸಿದ್ಧ ವೈದ್ಯ ವಿಶದೀಕರಿಸಿದ. ಹಾಗೆಯೇ ವಿಷಪ್ರಾಶನ ಸಂದರ್ಭಗಳೆಂದು ಅನುಮಾನವಿರುವ ಪ್ರಸಂಗಗಳಲ್ಲಿ ಜಠರ, ಕರುಳು ಮುಂತಾದ ಅಂಗಗಳನ್ನು ರಾಸಾಯನಿಕ ಪರೀಕ್ಷೆಗಳಿಗಾಗಿ ಕಳುಹಿಸುವುದೂ ಅಳವಡಿಸಲ್ಪಟ್ಟಿದೆ. ಶವಪರೀಕ್ಷೆ ಮಾಡದೇ ಇರುವ ಸಂದರ್ಭಗಳಲ್ಲಿ ಮರಣಕಾರಣ ಯಾವಾಗಲೂ ವಾದಗ್ರಸ್ತವಾದುದೇ ಸರಿ. ನಿಖರವಾಗಿ ಇರುವುದೇ ಇಲ್ಲ. ಕೆಲವು ವೇಳೆ ಶವಪರೀಕ್ಷೆಯಿಂದ ತಿಳಿದುಬಂದ ಅಂಶಗಳೂ ವಾದಗ್ರಸ್ತವಾಗಿ ಇರುವುದಾದರೂ ಅಂಥ ಸಂದರ್ಭಗಳು ಕಡಿಮೆ.

	ಮರಣೋತ್ತರ ಪರೀಕ್ಷೆಯಲ್ಲಿ ಸಾಮಾನ್ಯಮರಣೋತ್ತರ ಪರೀಕ್ಷೆ (ಕ್ಲಿನಿಕಲ್ ನೆಕ್ರಾಪ್ಸಿ) ಮತ್ತು ವೈದ್ಯನ್ಯಾಯಾತ್ಮಕ ಮರಣೋತ್ತರ ಪರೀಕ್ಷೆ (ಮೆಡಿಕೊಲೀಗಲ್ ಪೋಸ್ಟ್ ಮಾರ್ಟಮ್) ಎಂದು ಎರಡು ವಿಧಗಳಿವೆ. ಸಾಮಾನ್ಯ ಮರಣೋತ್ತರ ಪರೀಕ್ಷೆಯನ್ನು ವೈದ್ಯವಿಜ್ಞಾನ ವಿಷಯಗಳ ವಿಶದೀಕರಣಕ್ಕಾಗಿ ಮಾಡಲಾಗುತ್ತದೆ. ಅಪಘಾತ, ಕೊಲೆ, ಆತ್ಮಹತ್ಯೆ ಮುಂತಾದ ಸಂದರ್ಭಗಳಲ್ಲಿ ನ್ಯಾಯಾಲಯಗಳ ಆದೇಶದಂತೆ ಮೃತದೇಹದ ವೈದ್ಯನ್ಯಾಯತ್ಮಕ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗುತ್ತದೆ. ಶವಪರೀಕ್ಷೆಯನ್ನು ಸಾಧಾರಣವಾಗಿ ರೋಗಪ್ರಕ್ರಿಯೆಗಳನ್ನು  ಅರಿತಿರುವ ವೈದ್ಯನೇ ವಿಶೇಷವಾಗಿ ರೋಗವಿಜ್ಞಾನಿ (ಪೆಥಾಲಜಿಸ್ಟ್) ಇಲ್ಲವೇ ನ್ಯಾಯವೈದ್ಯಕೀಯತಜ್ಞ (ಮೆಡಿಕೊಲೀಗಲ್ ಸ್ಟೆಷಲಿಸ್ಟ್) ಮಾಡುವುದಿದೆ.

	ಸಾಮಾನ್ಯ ಶವಪರೀಕ್ಷೆ ಮಾಡಬೇಕಾದರೆ ಮೃತವ್ಯಕ್ತಿಯ ವಾರಸುದಾರರ ಲಿಖಿತ ಅನುಮತಿ ಅಗತ್ಯ. ಚಿಕಿತ್ಸಿಸುತ್ತಿದ್ದ ವೈದ್ಯನ ಮನಸ್ಸಿಗೆ ಮರಣದ ಕಾರಣ ಖಾತರಿ ಎಂದು ತೋರಿದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಶವಪರೀಕ್ಷೆ ಮಾಡುವುದಿಲ್ಲ. ಮರಣದ ಕಾರಣ ಅನುಮಾನವಿದ್ದ ಸಂದರ್ಭದಲ್ಲಿ ವೈದ್ಯವಿಜ್ಞಾನ ವಿಷಯಗಳ ಸ್ಪಷ್ಟೀಕರಣಕ್ಕಾಗಿ ಶವಪರೀಕ್ಷೆ ಅಗತ್ಯವಾಗಿದೆ ಎಂದು ವಾರಸುದಾರರಿಗೆ ವಿವರಿಸಿ, ಮೃತದೇಹದ ಛೇದನೆಯನ್ನು ಗೌರವಭಾವದಿಂದಲೇ ಮಾಡಲಾಗುವುದೆಂದು ಅವರ ಅನುಮತಿ ಪಡೆಯಬೇಕು. ಶವಪರೀಕ್ಷಾನಂತರ ದೇಹವನ್ನು ಪೂರ್ಣವಾಗಿ ಮತ್ತು ಅಂದವಾಗಿ ಹೊಲಿದು ಕೊಯ್ದು ಮಾಡಿದ ಗುರುತುಗಳನ್ನು ಆದಷ್ಟು ಕಡಿಮೆ ಮಾಡಿಸಿ,  ಶವ ಸಹಜವಾಗಿಯೇ ಕಾಣುವಂತೆ ರೂಪಿಸಿ ವಾರಸುದಾರರ ವಶಕ್ಕೆ ಒಪ್ಪಿಸತಕ್ಕದ್ದು. ವಿಷಯ ಹೀಗಿರುವುದರಿಂದ ಸಾಮಾನ್ಯವಾಗಿ ಮುಖವನ್ನು ಕೊಯ್ದು ವಿರೂಪ ಮಾಡುವುದಿಲ್ಲ. ಅಪರೂಪ ಸಂದರ್ಭಗಳಲ್ಲಿ ಮಿದುಳನ್ನು ಪರೀಕ್ಷೆ ಮಾಡಬೇಕಾದಾಗ ತಲೆಯ ಚರ್ಮವನ್ನು ಹಿಂದುಮುಂದಾಗಿ ನಡುಮಧ್ಯೆ ಕೊಯ್ದು ಎರಡು ಕಡೆಯೂ ಕೆಳಕ್ಕೆಳೆಯ ತಲೆಬುರುಡೆಯನ್ನು ಬಹಿರಂಗಿಸಲಾಗುತ್ತದೆ. ಆನಂತರ ಅದನ್ನು ಹುಬ್ಬಿನ ನೇರದಲ್ಲಿ ಗರಗಸದಿಂದ ಸುತ್ತಲೂ ಕೊಯ್ದು ಚಿಪ್ಪನ್ನು ತೆಗೆದಿಡಲಾಗುತ್ತದೆ. ಆಮೇಲೆ ಮಿದುಳನ್ನು ತೆಗೆದು ಪರೀಕ್ಷಿಸಿ ನೋಡಿ ಪುನಃ ಸ್ವಸ್ಥಾನದಲ್ಲಿಟ್ಟು ಚಿಪ್ಪನ್ನು ಪುನಃ ಜೋಡಿಸಿ ಅದರ ಮೇಲೆ ಮುಂದೆ ಮಡಿಚಿಟ್ಟಿದ್ದ  ಚರ್ಮವನ್ನು  ಎಳೆದು ಸೇರಿಸಿ ಹೊಲಿಯಲಾಗುತ್ತದೆ. ಆದರೆ ಸಾಧಾರಣವಾಗಿ ಮುಂಡವನ್ನು ಮಾತ್ರ ಕೊಯ್ದು ನೋಡುವುದು ರೂಢಿ. ಇದಕ್ಕಾಗಿ ಅಂಗಾತ ಮಲಗಿಸಿದ ಶವದ ದೇಹದ ಚರ್ಮವನ್ನು ಥಿ ಆಕಾರವಾಗಿ ಕೊಯ್ಯಲಾಗುತ್ತದೆ. ಮೇಲಿನ ಎರಡುಗೆರೆಗಳು ಎರಡು ಕಂಕುಳುಗಳಿಂದ ಪ್ರಾರಂಭವಾಗಿ ಎದೆಯ ಮಧ್ಯದಲ್ಲಿ (ಹೃದಯದ ನೇರದಲ್ಲಿ) ಸೇರುತ್ತವೆ. ಅಲ್ಲಿಂದ ಕಿಬ್ಬೊಟ್ಟೆ ಮೂಳೆಯವರೆಗೂ ಒಂದು ನಡುಮಧ್ಯಗೆರೆ. ಹೀಗೆ ಚರ್ಮದ ದಪ್ಪ ಪೂರ್ತ ಕೊಯ್ದ ಚರ್ಮವನ್ನು ಎಡ, ಬಲ ಮತ್ತು ಮೇಲಿನ ಮೂರು ಭಾಗಗಳಾಗಿ ಅವುಗಳ ಅಡಿರಚನೆಯಿಂದ ಬಿಡಿಸಲಾಗುತ್ತದೆ. ಹಾಗೆ ಮಾಡಿದಾಗ ಉದರದ ಅಂಗಗಳು ಕಾಣಿಸುವುವಾದರೂ ಎದೆಯ ಅಂಗಗಳು ಎದೆಗೂಡಿನಲ್ಲಿ ಅಡಗಿಯೇ ಇರುತ್ತವೆ. ಆದ್ದರಿಂದ ಎದೆಮೂಳೆಯ ಅಚೀಚೆ ಎರಡು ಕಡೆಗಳಲ್ಲೂ ಪಕ್ಕೆಲುಬಿನ ಮೃದ್ವಸ್ಥಿಗಳನ್ನು ಕೊಯ್ದು ಎದೆ ಮೂಳೆಯನ್ನು ತೆಗೆದಿಟ್ಟು ಪಕ್ಕೆಲುಬು ಗೂಡನ್ನು ಎರಡು ಪಕ್ಕಗಳಿಂದಲೂ ಎಳೆದು ಹಿಗ್ಗಲಿಸಿ ಎದೆಗೂಡಿನ ಅಂಗಗಳಾದ ಹೃದಯ ಮತ್ತು ಶ್ವಾಸಕೋಶಗಳನ್ನು ಕಾಣುವಂತೆ ಮಾಡಲಾಗುತ್ತದೆ.  ಅನಂತರ ಎಲ್ಲ ಅಂಗಗಳನ್ನೂ ಒಂದೊಂದಾಗಿ ಕೊಯ್ದು ತೆಗೆದು. ಒಂದೊಂದರ ಮೇಲ್ಮೈನೋಟ, ಅದರ ಗಾತ್ರ, ಅದನ್ನು ಸೀಳಿದ ಮೈನೋಟ ಇವನ್ನು ಗಮನಿಸಲಾಗುತ್ತದೆ. ರೋಗಗ್ರಸ್ತಭಾಗವೆಂದು ತೋರಿದ ಅಂಗದಲ್ಲಿ ಅಲ್ಲಿಯ ತುಣುಕೊಂದನ್ನು ತೆಗೆದು ಅದನ್ನು ಸಂದರ್ಭಾನುಸಾರ, ಮದ್ಯಸಾರದಲ್ಲಿಯೋ, ಫಾರ್ಮಲಿನ್ನಿನಲ್ಲಿಯೋ, ತೆಗೆದಿಟ್ಟುಕೊಳ್ಳಲಾಗುತ್ತದೆ. ಹೀಗೆಲ್ಲ ಮಾಡುವಾಗ ಗಮನಕ್ಕೆ ಬಂದ ಎಲ್ಲ ವಿಷಯಗಳನ್ನೂ ಗುರುತುಹಾಕಿಕೊಂಡು ಅವುಗಳ ಪ್ರಾಮುಖ್ಯ, ಅನುಕ್ರಮ ಇತ್ಯಾದಿಗಳಿಗೆ ಅನುಸಾರವಾಗಿ ಪಟ್ಟಿಮಾಡಿ ಸಮಗ್ರ ಚಿತ್ರವನ್ನು ಮೂಡಿಸಿಕೊಳ್ಳಲಾಗುತ್ತದೆ. ಅನಂತರ ಇವುಗಳಲ್ಲಿ ಯಾವ ಒಂದು ವಿಶಿಷ್ಟ ವಿಷಯಲೋಪವಾಗಿದ್ದಿದರೆ ಮರಣ ಸಂಭವಿಸುತ್ತಿರಲಿಲ್ಲವೋ ಎಂಬುದನ್ನು ಪರ್ಯಾಲೋಚಿಸಿ ಅದೇ ಮರಣಕ್ಕೆ ಬಲುಮಟ್ಟಿನ ಕಾರಣ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ಆನಂತರ ತೆಗೆದಿಟ್ಟಿರುವ ಅಂಗ ತುಣುಕುಗಳನ್ನು ಯುಕ್ತ ರೀತಿಯಲ್ಲಿ ಸಂಸ್ಕರಿಸಿ ಅವುಗಳ ಸೂಕ್ಷ್ಮದರ್ಶಕ ಪರೀಕ್ಷೆ ಅಗತ್ಯವಾಗಿದ್ದರೆ ಏಕಾಣು ಪರೀಕ್ಷೆ ಹಾಗೂ ರಾಸಾಯನಿಕ ಪರೀಕ್ಷೆಗಳನ್ನು ಮಾಡಿ ಫಲಿತಾಂಶಗಳನ್ನು ಮೇಲಿನ ತೀರ್ಮಾನಕ್ಕೆ ಅನ್ವಯಿಸಿ ಮರಣಕ್ಕೆ ಇಂಥದೇ ಕಾರಣ ಎಂದು ಖಚಿತವಾಗಿ ನಿರ್ಧರಿಸಲಾಗುತ್ತದೆ. ಮರಣಪೂರ್ವ ರೋಗಲಕ್ಷಣಗಳಿಗೂ ಮರಣೋತ್ತರ ತನಿಖಾ ಫಲಿತಾಂಶಗಳಿಗೂ ಹೊಂದಾಣಿಸಿ ಬರೆದು ಮರಣೋತ್ತರ ದಾಖಲೆಯನ್ನು (ಪೋಸ್ಟ್ ಮಾರ್ಟಮ್ ರಿಕಾರ್ಡ್) ಮುಕ್ತಾಯ ಮಾಡಲಾಗುತ್ತದೆ. ಅಂಗಗಳನ್ನು ಪುನಃ ಆಯಾಸ್ಥಳಗಳಲ್ಲೇ ಇಟ್ಟು ಅಗತ್ಯವಿದ್ದರೆ ಒಂದು ಹೊಲಿಗೆ ಹಾಕಿ ಬಂಧಿಸಿ ಎದೆ ಮೂಳೆಯನ್ನು ಸ್ವಸ್ಥಾನದಲ್ಲಿ ಇಟ್ಟು ಚರ್ಮದ ಮೂರು ಭಾಗಗಳನ್ನು ಪುನಃ ಸೇರಿಸಿ ಥಿ ಆಕಾರದಲ್ಲಿ ಹೊಲಿದು ದೇಹಚ್ಛೇದನ ಮಾಡಿರುವ ಗುರುತನ್ನು ಆದಷ್ಟು ಕಡಿಮೆಮಾಡಿ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಗುತ್ತದೆ. 

	ವೈದ್ಯನ್ಯಾಯಾತ್ಮಕ ಪರೀಕ್ಷೆಯನ್ನು ನ್ಯಾಯಾಧಿಕಾರಿ ಅದಕ್ಕೆ ಅಪ್ಪಣೆ ಮಾಡಿದ ಮೇಲೆಯೇ ಮಾಡತಕ್ಕದ್ದು; ಮತ್ತು ಮಾಡಲೇಬೇಕು. ಇದಕ್ಕೆ ನ್ಯಾಯಾಧಿಕಾರಿ ಅಪ್ಪಣೆ ಎಷ್ಟು ಅಗತ್ಯವೋ ವಾರಸುದಾರರ ಅನುಮತಿ ಅಷ್ಟೇ ಅನಗತ್ಯ. ವೈದ್ಯನ್ಯಾಯಾತ್ಮಕ ಶವಪರೀಕ್ಷೆ ಮಾಡುವಾಗ ಇನ್ನಷ್ಟು ತಪಶೀಲಾಗಿ ಎಚ್ಚರಿಕೆಯಿಂದ ಪರೀಕ್ಷೆ ಮಾಡಬೇಕಾಗುತ್ತದೆ. ಏಕೆಂದರೆ ಮರಣದ ಕಾರಣ ಇಂಥದೇ ಎಂಬುದು ಖಚಿತವಾಗಿರುವ ಸಂದರ್ಭಗಳಲ್ಲೂ ಕಾಲದೇಶ ವರ್ತಮಾನಗಳ ತಪಶೀಲುಗಳು ಶವಪರೀಕ್ಷೆಯ ಜೊತೆಗೆ ಅಗತ್ಯವಾಗುತ್ತವೆ. ಉದಾಹರಣೆಗೆ ನವಜಾತ ಶಿಶುಹತ್ಯೆ ಆರೋಪಣೆಯಲ್ಲಿ ಹುಟ್ಟಿದ ಮಗು ಸತ್ತೇಹುಟ್ಟಿತೋ ಹುಟ್ಟಿದ ಮೇಲೆ ಸತ್ತಿತೋ ಹಾಲೇ ಹಾಕದೇ ಸತ್ತಿತೋ ಎಂಬುದನ್ನು ತನಿಖೆ ಮಾಡಬೇಕಾಗುತ್ತದೆ. ಶವ ಸ್ತ್ರೀಯದಾಗಿದ್ದರೆ ಆ ವ್ಯಕ್ತಿ ಗರ್ಭಿಣಿ ಆಗಿದ್ದಳೋ ಇಲ್ಲವೋ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕಾಗುತ್ತದೆ. ಮೃತದೇಹ ಇದ್ದ ಸ್ಥಳಪರೀಕ್ಷೆಯಿಂದ ಒಂದು ಪತ್ರ, ಶೀಷೆ, ಪೊಟ್ಟಣ, ಆಯುಧ, ಹಗ್ಗ ಇತ್ಯಾದಿಗಳ ಇರುವಿಕೆಯಿಂದ ಮರಣ ಕೊಲೆಯಿಂದಲೋ ಆತ್ಮಹತ್ಯೆಯಿಂದಲೋ ಎಂಬುದಕ್ಕೆ ಪುರಾವೆ ಸಿಕ್ಕುತ್ತದೆ. ಮರಣಕ್ಕೆ ಕಾರಣವಾಗಿರಬಹುದಾದ ಇನ್ನೂ ಯಾವುದೇ ಸಂದರ್ಭವೂ ಇಲ್ಲ ಎಂದು ಖಾತರಿ ಮಾಡಿಕೊಂಡು ಆ ವಿಷಯವನ್ನು ದಾಖಲಾತಿಸಬೇಕು ಮರಣಕಾಲದ ಅಂದಾಜು, ವ್ಯಕ್ತಿಯ ನೈಸರ್ಗಿಕ ಇಲ್ಲವೇ ಕೃತಕ ಹಲ್ಲುಗಳ ನಮೂನೆ, ರಕ್ತಪಂಗಡ, ಬಟ್ಟೆಬರೆಗಳು ಇತ್ಯಾದಿಗಳ ವಿವರಗಳನ್ನು ಕೂಡಲೆ ದಾಖಲೆ ಮಾಡಿಕೊಳ್ಳಬೇಕು.

	ಮೃತದೇಹವನ್ನು ಕೊಯ್ಯುವುದಕ್ಕೆ ಮುನ್ನ ದೇಹದ ಹೊರಲಕ್ಷಣಗಳು, ವೈಯಕ್ತಿಕವೆನ್ನಬಹುದಾದ ಗುರುತುಗಳು, ಗಾಯದ ಸ್ಥಿತಿ ಇತ್ಯಾದಿಗಳನ್ನೆಲ್ಲ ಕರಾರುವಕ್ಕಾದ ಅಳತೆ ಸಹಿತ ದಾಖಲಿಸಬೇಕು. ಗಾಯದ ತಪಶೀಲುಗಳು ಗಾಯದಿಂದಲೇ ಸಾವು ಆಗಿರಬಹುದೇ ಎಂಬುದನ್ನು ತಿಳಿಸುವಂತಿರಬೇಕು. ಬಾಯಿ ಸುತ್ತ ಸುಟ್ಟುಗೊಳಿಸಿ ಹೋದಂತಿದೆಯೇ ನೋಡಬೇಕು. ದೇಹಚ್ಛೇದ ಮಾಡುವಾಗ ಈ ಬಗೆಯ ಶವಪರೀಕ್ಷೆಯಲ್ಲಿ ಕೆಲವು ವೇಳೆ ಮುಖವನ್ನೂ ಕೊಯ್ದು ವಿರೂಪ ಮಾಡಬೇಕಾಗುತ್ತದೆ. ಉದಾಹರಣೆಗೆ ಮುಖಕ್ಕೆ ಗುಂಡೇಟು ಬಿದ್ದಿದ್ದಾಗ ಗುಂಡು ಎಷ್ಟು ಆಳಕ್ಕೆ ಹೋಗಿದೆ, ಯಾವ ಮಾರ್ಗವಾಗಿ ಹೋಗಿದೆ ಎಂಬುದನ್ನು ಕೊಯ್ದೇ ನೋಡಬೇಕಾಗುತ್ತದೆ. ಮರಣದ ಕಾರಣ ಪತ್ತೆ ಆದಾಗ ಅದು ಕೊಲೆಯಿಂದ ಆತ್ಮಹತ್ಯೆಯಿಂದ ಅಥವಾ ಆಕಸ್ಮಿಕತೆಯಿಂದ ಆಗಿದೆ ಎಂಬುದಕ್ಕೆ ತಕ್ಕಷ್ಟು ಪುರಾವೆಗಳಿಂದೊಡಗೂಡಿದ ಖಚಿತ ಅಭಿಪ್ರಾಯವನ್ನು ಕೊಡಬೇಕಾಗುತ್ತದೆ. ವೈದ್ಯನ್ಯಾಯಾತ್ಮಕ ಪರೀಕ್ಷೆ ಮುಗಿದ ಮೇಲೂ ಮೃತದೇಹವನ್ನು ವಾರಸುದಾರರ ವಶಕ್ಕೆ ಕೊಡಕೂಡದು. ಅದು ಇನ್ನೂ ನ್ಯಾಯಲಯದ ಹಕ್ಕಿಗೆ ಒಳಪಟ್ಟಿರುತ್ತದೆ. ನ್ಯಾಯಧಿಕಾರಿ ಅನುಮತಿ ಪಡೆದ ಮೇಲೆ ಮಾತ್ರ ವಾರಸುದಾರರಿಗೆ ಮೃತದೇಹವನ್ನು ಒಪ್ಪಿಸಬಹುದು. ಹಾಗೆ ಒಪ್ಪಿಸುವಾಗ ಸಾಮಾನ್ಯ ಶವಪರೀಕ್ಷೆಯಲ್ಲಿಯಂತೆಯೇ ಶವವನ್ನು ಆದಷ್ಟು ಪೂರ್ವಸ್ಥಿತಿಗೆ ತಂದು ವಾರಸುದಾರರಿಗೆ ಕೊಡತಕ್ಕದು. ಮರಣ ಕಾರಣದ ಊಹೆಗೆ ಬದಲು ಅದರ ಬಗ್ಗೆ ಖಚಿತ ಅಭಿಪ್ರಾಯ ದೊರೆಯುವಂತೆ ವೈದ್ಯನ್ಯಾಯಾತ್ಮಕ ಮರಣ ಪರೀಕ್ಷೆ ಮಾಡುತ್ತದೆ. ಇದರಿಂದ ತಪ್ಪಿತಸ್ಥರನ್ನು ಶಿಕ್ಷಿಸಿ ಮಿಥ್ಯಾರೋಪಿತರನ್ನು ರಕ್ಷಿಸಲು ಸಹಾಯವಾಗುತ್ತದೆ.

	ಮರಣೋತ್ತರ ಪರೀಕ್ಷೆಯ ಉಪಯೋಗಗಳು; ಮರಣೋತ್ತರ ಪರೀಕ್ಷೆ ಸಾವಿನ ಕಾರಣದ ಬಗ್ಗೆ ನಿಸ್ಸಂಶಯ ಮಾಹಿತಿಯನ್ನು ಒದಗಿಸುವುದಕ್ಕಿಂತಲೂ ಹೆಚ್ಚು ಉಪಯುಕ್ತ ಕ್ರಮವಾಗಿದೆ ಎಂಬುದನ್ನು ಗ್ರಹಿಸಬೇಕು. ವೈದ್ಯನ್ಯಾಯತ್ಮಕ ಶವಪರೀಕ್ಷೆಯಲ್ಲಿ ಇದೇ ಪ್ರಧಾನ ಉದ್ದೇಶವಾದರೂ ಸಾಮಾನ್ಯ ಶವಪರೀಕ್ಷೆಗಳಿಂದ ಯಾವುದೇ ರೋಗದ ವಿವಿಧ ಹಂತಗಳಲ್ಲಿ ಕಂಡುಬರುವ ಅಂಗ ವಿಕೃತಿಗಳು ವ್ಯಕ್ತವಾಗುತ್ತದೆ. ಇವನ್ನೆಲ್ಲ ಅನುಕ್ರಮವಾಗಿ ಜೋಡಿಸಿ ವಿಶ್ಲೇಷಿಸಿದರೆ ಮರಣ ಉಂಟುಮಾಡಲು ರೋಗ ಯಾವ ರೀತಿ ಪ್ರಬಲಿಸಿತು ಎನ್ನುವುದು ಅರ್ಥವಾಗುತ್ತದೆ. ಇಂಥ ವ್ಯಾಸಂಗದಿಂದ ಮಾತ್ರ ರೋಗಗಳ ಸ್ವಭಾವ ನಿಜವಾಗಿ ಅರ್ಥವಾದೀತೇ ಹೊರತು ಪ್ರಾಯೋಗಿಕ ಮತ್ತು ವಿಶಿಷ್ಟ ತನಿಖಾಕ್ರಮಗಳಿಂದ (ಅವು ಅನೇಕಾನೇಕವಾಗಿಯೇ ಇದ್ದರೂ) ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷಾವರದಿಯಿಂದ ನರಳಿಕೆಗೂ ಮರಣಕ್ಕೂ (ಮಾರ್ಬಿಡಿಟಿ-ಮಾರ್ಟಾಲಿಟಿ) ಇರುವ ಸಂಬಂಧ ಅರ್ಥಪೂರ್ಣವಾಗುತ್ತದೆ. ಸಾಂಕ್ರಾಮಿಕ ಪಿಡುಗುಗಳು ಮೊತ್ತ ಮೊದಲಾಗಿ ಪತ್ತೆ ಆಗುವುದು ಶವಪರೀಕ್ಷೆಗಳಿಂದಲೇ. ವೈದ್ಯ, ಆಸ್ಪತ್ರೆ, ಸಂಶೋಧಕ, ಆಧ್ಯಾಪಕ ಇವರುಗಳ ವಿಶಿಷ್ಟ ಚಟುವಟಿಕೆಗಳ ಸಮನ್ವಯಕ್ಕೆ ಶವಪರೀಕ್ಷೆ ಬಲು ಮುಖ್ಯ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ